"ಐ ಲವ್ ಯೂ" ಅಂತ ಹೇಳೋದು ಸಿಂಪಲ್ ಅಷ್ಟೆ. ಆದರೆ ಅದರ ಹಿಂದೆ ಇದೆ ಭಾವನೆಗಳ ಭಾರ…

ಸಾಮಾನ್ಯವಾಗಿ ಪ್ರೀತಿಯ ಮಾತುಗಳು ಸುಲಭವಾಗಿಯೇ ಹೇಳಬಹುದಾದವುಗಳಾಗಿವೆ ಎನ್ನಿಸುತ್ತದೆ. ಆದರೆ ಯಾರು, ಯಾವಾಗ, ಹೇಗೆ ಎಂಬುದನ್ನು ಬಲ್ಲದಾದರೆ ಮಾತ್ರ ಅದು ಜೀವಮಾನವನ್ನೇ ರೂಪಿಸಬಲ್ಲ ಶಕ್ತಿ. ಈ ಲೇಖನ ಒಂದು ಯಥಾರ್ಥದ ನೋಟ – ಪ್ರೀತಿ, ದಾಂಪತ್ಯ, ಸಮಾಜದ ನಿರೀಕ್ಷೆ, ಮತ್ತು ತಾವು ಬದುಕುತ್ತಿರುವ ಸಂಬಂಧಗಳ ಬಗ್ಗೆ ಚಿಂತನೆಯನ್ನು ಎಬ್ಬಿಸುವ ಸ್ಪಷ್ಟ ಪ್ರತಿಬಿಂಬ.

Surya

5/8/20241 min read

ಐ ಲವ್ ಯೂ..! – ಒಂದು ನುಡಿಗೆಯೊಳಗಿನ ದೀಪ್ತಿಮಯ ಬದುಕು

ಐ ಲವ್ ಯೂ..!
ಈ ಐ ಲವ್ ಯೂ ಹೇಳುವ ಸಮಯದಲ್ಲಿಸರಿಯಾದ ವ್ಯಕ್ತಿಗಳಿಗೆ ಹೇಳಿಲ್ಲ ಅಂದರೆ ತುಂಬಾ ಡೇಂಜರ್ ಕಣ್ರೀ. ಮದುವೆಯಾದ ಹೊಸತರಲ್ಲಿ ಚಿನ್ನ ಅನ್ನೋದೇನು... ಲವ್ ಯು ಅನ್ನೋದೇನು... ಯಾವುದಕ್ಕೂ ಬರವಿಲ್ಲ. ಹೇಗಾದರೂ ಮಾಡಿ ಅವನನ್ನು, ಅವಳ ಮನಸನ್ನು ಗೆಲ್ಲಬೇಕನ್ನೋದೊಂದೇ ಗುರಿ.

ಮೊದಮೊದಲ ಹೊಸತನದಲ್ಲಿ ಎಲ್ಲವೂ ಚೆಂದ. ಹೇಳೋದೆಲ್ಲವನ್ನೂ ಸಾಧಿಸಿ ಕೊಡುವ ಗಂಡ, ಅಡುಗೆ ತಿಳಿದಿಲ್ಲವಾದರೂ ಹೇಗಾದ್ರೂ ಗಂಡನಿಗೆ ನಳಪಾಕವನ್ನೇ ಬಡಿಸುವ ಹೆಂಡತಿ... ಆಹಾ ಸಂಸಾರ ಸ್ವರ್ಗ.

ಇತ್ತೀಚೆಗೆಲ್ಲೊ ಓದಿದ ಸುದ್ಧಿ ಯಾಕೋ ಒಂದಿಷ್ಟು ಯೋಚನೆ ಮಾಡುವಂತೆ ಮಾಡಿತು. ಮದುವೆಯಾಗಿ ಹತ್ತು ವರ್ಷವಾದರೂ ಹೆಂಡತಿ ಮೇಲೆ ಪ್ರೀತಿ ಕಡಿಮೆಯಾಗದ ಗಂಡ. “ನಾನು ನನ್ನ ಪತ್ನಿಯೊಡನಿರುವಾಗ ಆಕೆಯನ್ನೇ ದಿಟ್ಟಿಸುವೆ. ಅವಳೆಂದರೆ ನನಗೆ ಹುಚ್ಚು ಪ್ರೀತಿ.” — ಇದು ಯಾಕೆ ಹೀಗೆ? ನಿಮಗೂ ನಿಮ್ಮ ಹೆಂಡತಿ ಬಗ್ಗೆ ಹೀಗೆ ಅನಿಸುತ್ತದೆಯೇ? ಎಂದು ಆತ ಪ್ರಶ್ನಿಸೋ ಪರಿ ನಮಗೆ ನಗು ತರುತ್ತಾದರೂ, ಅದು ನಾವು ನಮ್ಮ ಸಂಸಾರದಲ್ಲಿ ಹೇಗಿದ್ದೇವೆಂದು ಚಿಂತಿಸುವಂತೆ ಮಾಡುವ ಅವಸರ ಕೂಡ.

ಹತ್ತು ವರ್ಷವಾದರೂ ಹೆಂಡತಿ ಮೇಲೆ ಕಿಂಚಿತು ಕಡಿಮೆಯಾಗದ ಪ್ರೀತಿಯೆಂದರೆ ಈತನಿಗೇನೋ ಸಮಸ್ಯೆ ಇದೆಯೆಂದು ವ್ಯಂಗ್ಯವಾಡಿದವರಿಗೇನು ಕಡಿಮೆಯಿಲ್ಲ. ಈತನ ಹೆಂಡತಿ ಅದೆಷ್ಟು ಪುಣ್ಯವಂತೆ ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ನಂಬಿ ಬಂದ ಹೆಣ್ಣನ್ನು ಚಿನ್ನದಂತೆ ನೋಡ್ಕೊಳ್ಳೋ ತಾಕತ್ತಿದ್ದರೆ ಮಾತ್ರ ಮದುವೆಯಾಗಬೇಕು ಅನ್ನುವವವರೂ ಅನೇಕ.

ಏನಾದರಾಗಲಿ — ಈ ಮನುಷ್ಯನ ಮನಸ್ಸೇ ಒಂಥರಾ ವಿಚಿತ್ರ ಕಣ್ರೀ. ಕೆಲವು ಬಾರಿಯಾದರೂ ತನಗೆ ದಕ್ಕದ್ದು, ತನ್ನಿಂದ ಸಾಧ್ಯವಾಗದ್ದು ಬೇರೆಯವರಿಗೂ ಬೇಡವೆಂಬ ವಿಲಕ್ಷಣ ಭಾವ. ಅದು ನಮ್ಮನ್ನು ಆವರಿಸಿದರೆ ನಮ್ಮ ಬದುಕಿನ ಐಶ್ವರ್ಯವೇ ಕುಂದುವುದೆಂದು ತಿಳಿಯದಷ್ಟು ಮೂರ್ಖ.

ಬೇರೆಯವರ ಸಂಸಾರದಲ್ಲಿ ಮೂಗು ತೂರಿಸಿ ಒಂದಿಷ್ಟು ಜಾಲಾ ಡಿದರೆ ಅದೇನೋ ನೆಮ್ಮದಿ ಎಂಥಹ ವಿಚಿತ್ರ ಮಾನವ. ಗಂಡ - ಹೆಂಡತಿ ಕೈ ಹಿಡಿದು ನಡೆದರೆ, ನಕ್ಕು ಮಾತಾಡಿದರೆ, ಅದೇನೋ ತಪ್ಪು ನಡೆದಿತ್ತೆಂದು ದಿಟ್ಟಿಸುವ ಒಂದಿಷ್ಟು ಮಂದಿ. ಇಂಥವರನ್ನು ನಿರೀಕ್ಷಿಸಿದರೆ ಬದುಕಿನಲ್ಲಿ ಯಾವುದೇ ಗತಿ ಇಲ್ಲದೆ ಮನೆಯ ನಾಲ್ಕು ಗೋಡೆ ಮಧ್ಯೆ ತಮ್ಮ ಯೋಚನೆಗಳನ್ನು ಸೀಮಿತಗೊಳಿಸಿ, ಬದುಕಿನಲ್ಲಿ ಹೀನಾಯ ಸೋಲು ಕಂಡವರೆಂಬುದು ತಿಳಿಯುತ್ತದೆ. ಗುಣಪಡಿಸಲಾಗದ ಖಾಯಿಲೆ. ಪಾಪ!

ಇನ್ನು ಕೆಲವು ಹಿರಿತಲೆಗಳಿರುತಾರೆ... ನಮ್ಮ ಮನೆಯಲ್ಲಿಯೂ ಇಂಥವರಿರಬಹುದೇನೋ... ಗಂಡ ಹೆಂಡತಿ ಒಟ್ಟಿಗೆ ಕುಳಿತು ಮಾತಾಡೋದೇನಿದ್ದರೂ ಕೋಣೆಯೊಳಗೆ ಸೀಮಿತ. ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ... ಗಂಡನ ಮುಖವನ್ನು ಕತ್ತೆತ್ತಿ ನೋಡುತಿರಲಿಲ್ಲ... ಪ್ರೀತಿ ಎಂದರೆ ಕತ್ತಲ ಕೋಣೆ ಅಷ್ಟೇ — ಅದೇ ರೀತಿ ಹೀಗಿನವರೂ ಇರಬೇಕೆ?

ಕೊನೆಗೆ ಹೇಳುವುದೂ ಇದೆ — ಜೀವನದಲ್ಲಿ ಮಕ್ಕಳನ್ನು ಸಾಕಿ, ಗಂಡನ ಬೆಂಬಲವಿಲ್ಲದೆ ಎಲ್ಲವನ್ನು ನಿಭಾಯಿಸಿ ಬಸವಳಿದೆ. ಮನೆಕೆಲಸದಲ್ಲೂ ಗಂಡನ ಸಹಾಯವಿಲ್ಲ, ಮಕ್ಕಳ ಸಾಕೋಕು ಆತನಿಲ್ಲ. ಸಮಯಕ್ಕೆ ಸರಿಯಾಗಿ ಕೈ ತೊಳೆದು ಊಟಕ್ಕೆ ಮಾತ್ರ ಬರುವ ಗಂಡ. ಅಲ್ಲಿ ನಗುವಿಲ್ಲ, ಪ್ರೀತಿ ಅನ್ನೋದೇನು ಅನ್ನುವ ಅರಿವೇ ಇಲ್ಲ. ಏನೋ ಬದುಕಬೇಕಲ್ವಾ ಅನ್ನೋ ಬರಡು ಜೀವನ.

ಇಂತಹ ಜೀವನಾನುಭವವಿರುವ ಆಕೆ ತನ್ನ ಮಗ ಮದುವೆಯಾಗಿ ಹೆಂಡತಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡಿದರೆ, ಮನೆ ಸ್ವಚ್ಚ ಮಾಡಿದರೆ – “ಅಯ್ಯೋ ಅದ್ಯಾಕೆ? ಅವಳಿಲ್ವಾ ಇದೆಲ್ಲ ಮಾಡೋಕೆ? ನೀನ್ಯಾಕೆ ಮಾಡುತ್ತೀಯ?” ಅನ್ನೋ ರಾಗ. ಹಾಗಾದ್ರೆ ಆ ಮಹಿಳೆ ತನ್ನ ಬದುಕಿನಿಂದ ಕಲಿತ್ತಿದ್ದಾದರೂ ಏನು? ತನ್ನ ಅನುಭವ ಇನ್ನೊಬ್ಬ ಹೆಣ್ಣುಮಗಳಿಗೆ ಬರಬಾರದೆನ್ನುವ ಆ ಒಳ್ಳೆತನ ತನ್ನ ಮಕ್ಕಳ ವಿಚಾರಕ್ಕೆ ಬಂದಾಗ ಮರೆತು ಬಿಡೋದೇ?

ತನ್ನ ಗಂಡನಿಂದ ತಾನು ಪ್ರೀತಿಯ ಒಂದು ಮಾತಾನ್ನಾದ್ರೂ ಕೇಳೋಕೆ ಅದೆಷ್ಟು ಆಸೆ ಪಟ್ಟಿದ್ದೆ ಅಂತ ಗೊಣೊಗೋ ಆಕೆಗೆ ತನ್ನ ಮಕ್ಕಳಾದ್ರು ಸ್ವತಂತ್ರವಾಗಿ ಆ ಖುಷಿಯನ್ನೆಲ್ಲ ಅನುಭವಿಸಲಿ ಎಂದು ಬಯಸಬಾರದೇಕೆ? ಅದೇ ರೀ ಮನುಷ್ಯ ಮನಸ್ಸೇ ಒಂಥರಾ ವಿಲಕ್ಷಣ. ಎಲ್ಲರೂ ಅಂಥವರಲ್ಲ, ಕೆಲವು ರೋಗ ಪೀಡಿತ ಮನಸುಗಳು ಮಾತ್ರ.

ಪ್ರೀತಿ ಅಂದರೆ ಸ್ವರ್ಗಕ್ಕೆ ಕಿಚ್ಚು ಹಿಡಿವಂಗೆ ಇರ್ಬೇಕು. ಇರೋ ಒಂದು ಬದುಕಲ್ಲಿ ಕೊನೇವರೆಗೂ ಕೈ ಹಿಡಿಯುವ ಸಂಗಾತಿಯ ಪ್ರೀತಿಮಾಡದಿದ್ರೆ ಇನ್ನೇನು ಬದುಕು ಅಲ್ವೇ? ದಾಂಪತ್ಯದಲ್ಲಿ ಮೂರನೇ ವ್ಯಕ್ತಿಗೆ ಮೂಗು ತೂರಿಸಲು ಎಲ್ಲಿವರೆಗೆ ಅವಕಾಶ ಕೊಡುವುದಿಲ್ಲವೋ, ಅಲ್ಲಿವರೆಗೂ ಸಂಸಾರದ ಸರಿಗಮಪ ಚೆನ್ನಾಗಿಯೇ ಮೀಟುತದೆ.

ಮದುವೆಯಾಗಿ ನಲವತ್ತು ವರ್ಷವಾದರೂ ಅದೇ ಹೊಸತನ, ಪ್ರೇಮ ಪ್ರೀತಿಯನ್ನ ಉಳಿಸಿಕೊಂಡು, ಪರಸ್ಪರ ಗೌರವಿಸಿ ಜೀವನ ಸಾಗಿಸುವ ದಂಪತಿಗಳು ಅದೆಷ್ಟೋ ಮಂದಿ ನಮ್ಮ ನಡುವಿರುವಾಗ, ಅಂಥವರೇ ನಮ್ಮ ಮಾದರಿಯಾಗಬೇಕಲ್ವೇ?

ಯಾರು ಏನೇ ಹೇಳಲಿ, ನಮ್ಮ ಬದುಕು – ನಿರ್ಧಾರ ನಮ್ಮದು ಮಾತ್ರ. ಅಲ್ಲಿ ಯಾರಿರ್ಬೇಕು, ಯಾರನ್ನು ದೂರ ಇಡ್ಬೇಕು ಅನ್ನೋ ಸ್ಪಷ್ಟ ಅರಿವಿದ್ದರೆ ಜೀವನ ಇನ್ನಷ್ಟು ಸ್ವಚ್ಛ ಸುಂದರವಾಗಿ ಮುಂದಕ್ಕೋಡುತದೆ.

ಇರುವ ಒಂದು ಜೀವನದಲ್ಲಿ ಪ್ರೀತಿಸೋ ಸಮಯವನ್ನು ಕಚ್ಚಾಡಿ ಕಳೆಯದೆ... ವೈಯಕ್ತಿಕ ವಿಷಯಗಳು ಮೂರನೇ ವ್ಯಕ್ತಿಗೆ ಬಿಟ್ಟು ಕೊಡದೆ ಪ್ರೀತಿಯಿಂದ ಮುಂದೆ ಸಾಗುವಂತಾಗಲಿ.

ಇನ್ನಾದರೂ ಒಂದು ಬಾರಿ ಹೆಂಡತಿಗೊಂದು “ಐ ಲವ್ ಯು” ಹೇಳಿ...
ಆಗ ಆಕೆ ಕಣ್ಣಲ್ಲಿ ಮೂಡೋ ಮಿಂಚು... ಆಗ ನೀವನುಭವಿಸುವ ಆ ಅವ್ಯಕ್ತ ಖುಷಿ — ಇವನ್ನೆಲ್ಲಾ ಜೀವನದಲ್ಲಿ ಒಮ್ಮೆ ಮಾತ್ರವಲ್ಲ, ಪ್ರತಿ ಕ್ಷಣದಲ್ಲೂಅನುಭವಿಸಬೇಕು...

ಏನಂತೀರಾ? ಹಾಗಾದ್ರೆ ಹೇಳಿ ಬಿಡಿಯಲ್ಲ "ಐ ಲವ್ ಯೂ" ಅಂತ..! ❤️

✍️ ಸೂರ್ಯ ವರ್ಷ