yellow sunflower field during daytime

ಹೊಸ ಆರಂಭ… ಹೊಸ ಸೂರ್ಯೋದಯ!

ಬಾಲ್ಯ ಊರಿನ ನೆನೆಪಿನಲ್ಲಿ, ಬದುಕಿನ ಹೊಸ ಅಧ್ಯಾಯವಾಗಿ ಮತ್ತೆ ಬರವಣಿಗೆಯತ್ತ ಹೆಜ್ಜೆ ಇಡುತ್ತಿದ್ದೇನೆ. ಮಕ್ಕಳ ಹಾಸುಹೊಕ್ಕಿನಲ್ಲಿ ಮರೆತುಹೋದ ನನ್ನ ಕನಸು ಈಗ ಪುನರ್ಜನ್ಮ ಹೊಂದುತ್ತಿದೆ.

Surya Varsha

5/8/20241 min read

ಇಂತಿಪ್ಪ ನಾನು...

ಬರವಣಿಗೆಯ ಮೂಲಕ ನಿಮ್ಮ ಮುಂದೆ ನಾನು ಈ ತರ ಬರುವಾಗ ಯಾಕೋ ಪದಗಳೇ ನಿಲುಕುತಿಲ್ಲ... ಮನಸಲ್ಲಿ ಹೊಸ ಚೈತನ್ಯ ಮೂಡಿದೆ ನಿಜ...

ನನ್ನ ನಿಮ್ಮ ಈ ಭಾಂಧವ್ಯಕ್ಕೆ... ಗೆಳತನಕ್ಕೆ ಕಿರು ಪರಿಚಯವೊಂದು ಬೇಕಲ್ಲವೇ? ಹೌದು ಖಂಡಿತ. ನಾನು ಸೂರ್ಯ ವರ್ಷಾ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಮುಗಿಸಿ ಒಂದಿಷ್ಟು ಕಾಲ ಬೆಂಗಳೂರಿನಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ.

ಕಾಲಚಕ್ರ ಉರುಳಿದಂತೆ ಯಾಕೋ ಬೆಂಗಳೂರ ಬದುಕಿಗೆ ಬೈ ಹೇಳಿ ಊರ ಕಡೆಗೆ ತೆರಳುವ ಹಂಬಲ ಹೆಚ್ಚಾದಾಗ ಮನ ನುಡಿದಂತೆ ನಡೆಯುವ ಮನಸಾಯಿತು. ಮರಳಿ ಊರ ಮಡಿಲು ಸೇರಿದೆ… ಮನೆಯಲ್ಲಿಯೇ ಕುಳಿತು ಒಂದಿಷ್ಟು ಕಥೆ, ಕವನ ಗೀಚಿದ್ದೂ ಆಯಿತು. ಈ ಮಧ್ಯೆ ಕನಸೇ ಬಂತೆ ಮದುವೆಯೂ ನಡೆಯಿತು. ಈಗ ಇಬ್ಬರು ಮಕ್ಕಳ ತಾಯಿ.

ಈ ಮಧ್ಯೆ ಬರವಣಿಗೆ ಎಲ್ಲೋ ಮರೆಯಾಯಿತು. ಮಕ್ಕಳ ಆರೈಕೆಯಲ್ಲೇ ಖುಷಿಕಂಡೆ... ಯೋಚನೆ ಮಾಡಲು ಸಮಯವೇ ಇಲ್ಲವೇನೋ ಎಂಬಂತೆ ಕಳೆದೆ ಎಂಟು ವರ್ಷಗಳು. ಮಕ್ಕಳ ಜೊತೆ ಮಗುವಾಗಿ... ಅವರೊಂದಿಗೆ ಕಳೆದ ಪ್ರತಿ ನಿಮಿಷವೂ ಅಮೂಲ್ಯ. ನನ್ನ ಖುಷಿಯ ಜೋಳಿಗೆ ತುಂಬಿದ ಈ ವರ್ಷಗಳಿಗೆಲ್ಲ ನನ್ನ ಪತಿಯ ಬೆಂಬಲವಂತೂ ಖಂಡಿತವಿತ್ತು... ಈಗಲೂ ಅದು ನಿರಂತರ...

ಆ ಪ್ರೀತಿಗೆ... ನನ್ನ ಬದುಕು ಚೆಂದವಾಗಿಸಿದ ರೀತಿಗೆ ಸದಾ ಋಣಿ. ನನ್ನ ಖುಷಿಗೆಲ್ಲ ಜೊತೆಯಾಗುವ ಜೊತೆಗಾರನ ಬೆಂಬಲದಿಂದ ಪುನಃ ನಾನು ನಿಮ್ಮ ಮುಂದಿದ್ದೇನೆ... ಒಂದಿಷ್ಟು ನಿಮ್ಮ ಜೊತೆ ಮಾತಾಡಬೇಕಿದೆ... ಮನಸಲ್ಲಿ ಮೂಡಿದ ಹೊಸ ಆಶಯಗಳಿಗೆ ಜೀವ ತುಂಬಬೇಕಾಗಿದೆ. ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ...

ಇದು ನನಗೆ ಹೊಸ ಸೂರ್ಯೋದಯ.

ಹೊಸ ಆಶಯಗಳೊಂದಿಗೆ ಮತ್ತೆ ಬರುವೆ.

ಶುಭವಾಗಲಿ

-ಸೂರ್ಯ ವರ್ಷಾ