"ಒಮ್ಮೆ ಮೈದಾನ ತುಂಬಾ ನಗು… ಇಂದು ಪರದೆ ತುಂಬಾ ಮೌನ"

"ಒಬ್ಬ ತಾಯಿ ಮತ್ತು ಬರಹಗಾರ್ತಿಯಾಗಿ, ನನ್ನ ಬಾಲ್ಯದ ಮಣ್ಣಿನ ಆಟಗಳಿಂದ ಇಂದಿನ ಮೊಬೈಲ್ ಹಿಡಿದ ಮಕ್ಕಳ ಬದುಕಿನವರೆಗಿನ ಬದಲಾವಣೆ ನನ್ನ ಹೃದಯಕ್ಕೆ ತಾಕುತ್ತದೆ. ಈ ಬದಲಾವಣೆಯಲ್ಲಿ ಪೋಷಕರ ಪಾತ್ರ, ಜವಾಬ್ದಾರಿ, ಮತ್ತು ಮಕ್ಕಳಿಗೆ ನಿಜವಾದ ಬಾಲ್ಯದ ಖುಷಿಯನ್ನು ಮರಳಿ ಕೊಡುವ ಅಗತ್ಯವನ್ನು ಈ ಬರಹದಲ್ಲಿ ಹಂಚಿಕೊಂಡಿದ್ದೇನೆ."

Surya Varsha

8/11/20251 min read

ಮತ್ತೊಮ್ಮೆ ಬರಬಾರದೇ ನೀನು?!

ಮಳೆ ಹನಿ ಮುತ್ತು ಪೋಣಿಸಿದಂತೆ ಕೆಸುವಿನೆಲೆಗಳ ಮೇಲೆ ಮುತ್ತಿಕ್ಕಿ ಜಾರಿ ಭೂತಾಯೊಡನೆ ಸ್ನೇಹಬೆಳೆಸುವ ಅದ್ಭುತ ಕಣ್ಣುತುಂಬುತಾ ಕೂತಿದ್ದ ನನಗೆ ಯಾಕೋ ಬಾಲ್ಯ ಪದೇ ಪದೇ ನೆನಪಾಯಿತು. ಮಳೆ, ಕೆಸರಲ್ಲಿ ಆಟವಾಡುತಾ.. ಮೀನು ಹಿಡಿಯುತ ಹೋ ಆಟಗಳು ಒಂದೇ ಎರಡೇ ದಿನದಲ್ಲಿ ಮಾಡಿಮುಗಿಸಬೇಕಾದ ಕಿತಾಪತಿಯ ದೊಡ್ಡ ಪಟ್ಟಿಯೇ ಅಲ್ಲಿರುತಿತು. ಶಾಲೆಗೆ ನಡೆದುಕೊಂಡು ಹೋಗುವ ಮಜವೇ ಬೇರೆ. ಸಂಜೆಯಾದರಂತೂ ಶಾಲೆ ಬಿಟ್ಟು ದಾರಿಯುದ್ದಕ್ಕೂ ಆಟವಾಡುತ್ತಾ, ಗೆಳೆಯರೊಡನೆ ಹರಟೆ ಹೊಡೆಯುತ... ದಾರಿ ಬದಿಯಲ್ಲಿರುವ ಮಾವಿನ ಮರ ಹತ್ತಿ ಮಾವಿನ ಕಾಯಿ ಕೀಳಿ ಚೂರು ಚೂರು ಮಾಡಿ ಎಲ್ಲರೂ ಸೇರಿ ಹಂಚಿಕೊಂಡು ತಿನ್ನುವ ಆ ಖುಷಿಯ ಕಾಲ. ಲಗೋರಿ, ಬುಗುರಿ, ಕುಂಟೆ ಬಿಲ್ಲೆ, ಕಣ್ಣ ಮುಚ್ಚಾಲೆ, ಮಣ್ಣಾಟ ಅದೆಷ್ಟು ಬಗೆಯ ಆಟಗಳನ್ನ ಆಡುತ್ತಿದ್ದೆವೋ... ಕಳೆದ ಬಾಲ್ಯವನ್ನ ನೆನಸಿದರಂತೂ ಮತ್ತೊಮ್ಮೆ ಮರಳಿ ಮಗುವಾಗಬಾರದೇ ಅನಿಸುತದೆ. ನಾವು ಅನುಭವಿಸಿದ ಸುಂದರ ಬಾಲ್ಯವೇ ಇಂದಿನ ಬದುಕಿನ ಲಹರಿ... ಜೀವನ ಪ್ರೀತಿಗೆ ಕಾರಣ! ಅಂದು ನಾವಾಡುತಿದ್ದ ಬಹುತೇಕ ಆಟಗಳ ಬಗ್ಗೆ ಮಗನಿಗೆ ಹೇಳುವಾಗ ಹಾಗೆಲ್ಲ ಆಟ ಅಡುತ್ತಾ ಇದ್ರ. .. ಯಾಕೆ ? ಮೊಬೈಲ್ ಇರ್ಲಿಲ್ವ ಅಮ್ಮ ಅಂತ ಮುಗ್ದವಾಗಿ ಕೇಳಿದವನಿಗೆ ಏನ್ ಹೇಳ್ಬೇಕೊ ತಿಳಿಯದಾದೆ. ಅಂದಿನ ಅನಂತ ಆನಂದ ಈಗಿನ ಮಕ್ಕಳಿಗೆ ಬರಿಯ ಅಚ್ಚರಿ. ಆ ಖುಷಿಯನ್ನ ಅನುಭವಿಸಿ ಪಡೆಯಬೇಕೇ ಹೊರತು ವರ್ಣಿಸಲು ಅಸಾಧ್ಯ. ಹಿಂದಿನ ಬಹುತೇಕ ಆಟಗಳು ಅವರಿಗೆ ತಿಳಿದೇ ಇಲ್ಲ. ಅವೇನೇನೋ ವೀಡಿಯೋ ಗೇಮ್‌ಗಳಿಗೆ ಮಕ್ಕಳು ಆಕರ್ಷಿತರಾಗಿ ಮೈದಾನದಲ್ಲಿನ ಆಟಗಳು ಅವರಿಗೆ ಬೇಡವೇ ಬೇಡ. ದೈಹಿಕ ವ್ಯಾಯಾಮದ ಕೊರತೆಯಿಂದ ರೋಗ ನಿರೋಧಕ ಶಕ್ತಿಯೂ ಅವರಲ್ಲಿ ಕುಂದುತಿದೆ. ರೋಬೋಟಿಕ್ ಬದುಕೇ ಪ್ರಿಯವಾಗಿ ಹೋಗಿದೆ. ದಿನ ಪೂರ್ತಿ ಕೆಸರಲ್ಲಿ ಹಂದಿ ತರ ಬಿದ್ಕೊಂಡು ಆಟ ಆಡುತ್ತೀರಾ ಅಂತ ಅಮ್ಮನತ್ರ ಬೈಸ್ಕೊಳ್ಳೋ ಕಾಲ ನಮ್ಮದಾದ್ರೆ ... ಈಗ ಮಗ ಹೋಗು ಮಣ್ಣಲಿ ಆಟ ಆಡು ಅಂತ ಹೇಳಿ ಆಡಿಸಬೇಕಾದ ಪರಿಸ್ಥಿತಿ. ಎಲ್ಲವೂ ಸಪ್ಪೆ. ಅವರಿಗೆ ಯಾವುದರಲ್ಲೂ ಹೊಸತನವಿಲ್ಲ...ಸದ್ದಿನ ನಗುವಿಲ್ಲ. ..ಎಲ್ಲವೂ ಕಂಡು ಪಳಗಿದ ಭಾವ.

ಸಂಭ್ರಮ ಮನೆಮಾಡಬೇಕಾದ ಪುಟಾಣಿಗಳಲ್ಲಿ ಆತಂಕದ ಕಾರ್ಮೋಡ, ಹಠ. ಇವೆಲ್ಲಾ ಈ ಪುಟಾಣಿಗಳದೇ ತಪ್ಪಾ? ಇವಕ್ಕೆಲ್ಲ ಕಾರಣ ಪೋಷಕರಾದ ನಾವೇ ತಾನೇ? ಯಾಕಂದ್ರೆ ಅವರ ಪುಟ್ಟ ಮನಸ್ಸಿನ ಖುಷಿ ,ಕನಸುಗಳನ್ನ ನಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಬೇಕಾದವರು ನಾವೇ ಅಲ್ಲವೇ? ಮಕ್ಕಳು ಬರಿಯ ಮೊಬೈಲ್ ಹುಳಗಳಾಗ್ತಾ ಇದ್ದಾರೆ ಏನ್ ಮಾಡೋದು ಅಂತ ಹೆತ್ತವ್ರು ಆತಂಕ ಪಡೋ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಅಂದ್ರೆ ಅಲ್ಲಿ ನಮ್ಮ ತಪ್ಪೇನು ಅಂತ ಯೋಚನೆ ಮಾಡಲೇಬೇಕಿದೆ. ಅವರ ಪ್ರತಿಯೊಂದು ಖುಷಿಯನ್ನು ಮೊಬೈಲ್ ಆವರಿಸಿಕೊಂಡು ಬಿಟ್ಟಿದೆಯೆಂದರೆ ನಾವು ಮಕ್ಕಳಿಗಾಗಿ ಸಮಯ ಮೀಸಲಿಡುತಿಲ್ಲವೆಂಬುದು ಬಹು ದೊಡ್ಡ ಸತ್ಯ. ಅಮ್ಮ ಬೋರಾಗ್ತಿದೆ ಸ್ವಲ್ಪ ಮೊಬೈಲ್ ಕೊಡು ಗೇಮ್ ಆಡ್ತೀನಿ ಅಂತ ಮಗ ಹಠ ಹಿಡಿಯುವಾಗ ಒಂದಷ್ಟು ಉದ್ದ ಬುದ್ಧಿವಾದದ ಭಾಷಣ ಬಿಗಿದು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ನಾವು ಎಷ್ಟೆಲ್ಲ ಬಗೆಯ ಆಟ ಆಡುತ್ತಾ ಇದ್ವಿ, ಹೊರಗಿನ ಬಯಲಲ್ಲೇ ದಿನ ದೂಡ್ತಾ ಇದ್ದ ತಮ್ಮ ಬಾಲ್ಯದ ಬಗ್ಗೆ ಬೀಗುವಾಗ ನಮ್ಮ ಮಗ-ಮಗಳ ಬಾಲ್ಯದ ಸುಂದರತೆಯನ್ನು ಕಸಿದುಕೊಳ್ಳುತಿರುವುದು ನಾವೇ ಅಲ್ಲವೇ? ಮಕ್ಕಳ ಪುಟ್ಟ ಮಾತುಗಳಿಗೆ ಮೊಬೈಲ್ ಬದಿಗಿಟ್ಟು ನಾವು ಕಿವಿಯಾಗ್ತೀವಾ? ಪ್ರತಿ ಬಾರಿ ಮಗು ನಮ್ಮ ಬಳಿ ಖುಷಿಯಿಂದ ಓಡಿ ಬರುವಾಗಲೂ ಕಿರಿ ಕಿರಿ ಮಾಡ್ಬೇಡ ನನಗೆ ಕೆಲಸವಿದೆಯೆಂದು ಮೊಬೈಲ್ ಕೊಟ್ಟು ನಮ್ಮದೇ ಕಾರ್ಯದಲ್ಲಿ ಮುಳುಗುವಾಗ ಪುಟಾಣಿ ಮನಸಿಗೆ ಆಗುವ ಗಾಯ ಅಷ್ಟಿಷ್ಟಲ್ಲ. ಅವರ ಪುಟ್ಟ ತಲೆಯಲ್ಲಿ ಮೂಡುವ ಸಾವಿರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ಕೊಡಲು ನಮಗೆ ಸಮಯವೆಲ್ಲಿದೆ? ಹಲವು ಬಾರಿ ಅವರ ಕುತೂಹಲವನ್ನ ಕೆಡಿಸುವುದು ಪೋಷಕರೇ. ಮನೆಯ ಇತರ ಮಂದಿಯೂ ಕಾರಣವಾಗಬಹುದು. ಮಕ್ಕಳ ಮಾನಸಿಕ ಆರೋಗ್ಯದ ಜವಾಬ್ದಾರಿ ಪೂರ್ಣವಾಗಿಯೂ ನಮ್ಮದೇ. ಹುಟ್ಟುತ್ತಲೆ ಯಾವ ಮಗುವೂ ಏನನ್ನು ಕಲಿತುಕೊಂಡು ಬರುವುದಿಲ್ಲ. ಮನೆಮಂದಿ, ಸುತ್ತ ಮುತ್ತಳಿನ ಪರಿಸರವೇ ಅವರಿಗೆ ಪ್ರತಿಯೊಂದನ್ನೂ ಕಲಿಸಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ಮಗುವಿನ ಹಿತದೃಷ್ಟಿಯಿಂದ ಅವರಿಗೆ ಬೇಕಾದ ಪೂರಕ ವಾತಾವರಣವನ್ನು ನಾವೇ ಒದಗಿಸಿಕೊಡಬೇಕಾದ ಅನಿವಾರ್ಯವಿದೆ.

ಹಿಂದೆ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವ ಅಜ್ಜ- ಅಜ್ಜಿಯಾದ್ರೂ ಇರುತಿದ್ದರು. ವಿಪರ್ಯಾಸವೆಂದರೆ ಈಗ ಹಿರಿಯರ ಕೈಗೂ ಮೊಬೈಲ್ ಬಂದು ಅವರಿಗೂ ತಮ್ಮ ಮೊಮ್ಮಕ್ಕಳ ಜೊತೆ ಸಮಯ ಕಳೆಯಲು ಬಿಡುವಿಲ್ಲ ಅನ್ನೋ ಸ್ಥಿತಿ. ಹೀಗಿರುವಾಗ ಅವರಿಗೆ ಬುದ್ಧಿವಾದ ಹೇಳುವ ಯೋಗ್ಯತೆಯಾದ್ರೂ ನಮಗೆಲ್ಲಿದೆ? ಮೊದಲು ನಮ್ಮನ್ನು ನಾವೇ ತಿದ್ದಿಕೊಳ್ಳಬೇಕಲ್ಲವೇ? ಪ್ರತಿದಿನವೂ ಮಕ್ಕಳಿಗೆ ಹೆತ್ತವರೊಂದಿಗೆ ಹಂಚಿಕೊಳ್ಳಲು ನೂರು ವಿಷಯಗಳಿರುತ್ತವೆ. ಶಾಲೆಯಿಂದ ಬರುವ ಮಕ್ಕಳನ್ನು ಇದಿರುಗೊಳ್ಳಲು, ಪ್ರೀತಿಯಿಂದ ಮಾತಾಡಿಸಲು ಅಪ್ಪನೋ ಅಮ್ಮನೋ ಖಂಡಿತಾ ಇರ್ಲೇ ಬೇಕು. ಅವರ ಬೇಕು ಬೇಡಗಳನ್ನು ಗಮನಿಸಿ, ಹಿಂಜರಿದಾಗ ಧೈರ್ಯ ತುಂಬಿ ಮುನ್ನಡೆಸಲು ಹೆತ್ತವರಿಗಷ್ಟೇ ಸಾಧ್ಯ ಅಪ್ಪ ಅಮ್ಮ ಇಬ್ಬರೂ ಆಫೀಸ್ ಕೆಲಸ. ಮಕ್ಕಳು ಮನೆಯಲ್ಲಿ ಕೆಲಸದವರೊಂದಿಗೂ, ಇನ್ಯಾರೊಂದಿಗೊ ಸಮಯ ಕಳೆಯಬೇಕಾದಾಗ ಖಂಡಿತವಾಗಿಯೂ ಹೆತ್ತವರೊಂದಿಗಿನ ಸ್ನೇಹದ ನಂಟು ಎಲ್ಲೋ ಕಳಚಿಕೊಳ್ಳುತಿರುತ್ತದೆ. ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಮೊಬೈಲ್ ಒಳಗೆ ಬಂಧಿಯಾಗುತ್ತದೆ. ಅವರಿಗೆ ಹೆತ್ತವರೊಂದಿಗೆ ಕಳೆದ ಪ್ರೀತಿಯ ಕ್ಷಣಗಳ ನೆನಪಿರೋದಿಲ್ಲ,ಹೆತ್ತವರ ಮುದ್ದಿನಲ್ಲಿ ಬೆಳೆಯೋ ಅವಕಾಶವೂ ಇಲ್ಲ! ಹಾಗಾದರೆ ಮಕ್ಕಳಿಗೆಂದು ಗಂಡ ಹೆಂಡತಿ ಇಬ್ಬರೂ ದುಡಿಯುವಾಗ ನಮಗರಿವಿಲ್ಲದೆ ಮಕ್ಕಳು ನಮ್ಮಿಂದ ದೂರ ಆಗ್ತಾ ಇದ್ದಾರೆ! ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುವನ್ನು ಒದಗಿಸಲು ಮಾತ್ರವಲ್ಲ ಹೆತ್ತವರು ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಮಯವನ್ನ ಮಕ್ಕಳಿಗೆ ಕೊಡಬೇಕಲ್ಲವೇ. ನಮ್ಮ ಮಕ್ಕಳಿಗಾಗಿ ಸ್ವಲ್ಪವಾದರೂ ತ್ಯಾಗದ ಮನೋಭಾವ ನಮ್ಮಲ್ಲಿ ಮೂಡದಿದ್ರೆ ಮಕ್ಕಳು ಹಾದಿ ತಪ್ಪುವಾಗ ಮಾತ್ರ ಹೆಚ್ಚೆತ್ತು ಪ್ರಯೋಜನವೇನು? ನಾವಿಂದು ಮೆಲುಕು ಹಾಕುತಿರುವ ನಮ್ಮ ಬಾಲ್ಯದ ಖುಷಿ, ಸೌಂದರ್ಯವನ್ನು, ಬದುಕಿನ ಆನಂದವನ್ನು ನಮ್ಮ ಮಕ್ಕಳೂ ಅನುಭವಿಸುವಂತಾಗಲಿ. ಆ ನವಿರಾದ ಭಾವ ಮುಂದಿನ ಪೀಳಿಗೆಗೂ ಪಸರಿಸಲಿ.

✍️ ಸೂರ್ಯವರ್ಷ