ವರದಕ್ಷಿಣೆ: ಮಗಳ ಬದುಕಿನ ಮೌನ ಅಳುವಿನ ಕತೆ

ಒಬ್ಬ ಹೆಣ್ಣುಮಗಳಾಗಿ, ಇನ್ನೊಬ್ಬ ಹೆಣ್ಣುಮಗಳ ನೋವು ಎಷ್ಟು ಭಾರವಾಗಿರಬಲ್ಲದು ಎಂಬುದು ನನಗೆ ಗೊತ್ತು. ವರದಕ್ಷಿಣೆಯ ಹೆಸರಿನಲ್ಲಿ ನಿತ್ಯವೂ ಕಣ್ಣೀರಿನಿಂದ ಹಾಸಿಗೆ ತೋಯಿಸುತ್ತಿರುವ ಅವಳ ಹೃದಯಕ್ಕೆ ಈ ಬರಹ ಒಂದು ಸಾಂತ್ವನ. ಇದು ಕೇವಲ ಬರಹವಲ್ಲ — ಅವಳ ನಗು ಉಳಿಸಬೇಕೆಂಬ ನನ್ನ ಅಂತರಾತ್ಮದ ಬದ್ಧತೆ. ಹೆಣ್ಣುಮಗಳು ಧೈರ್ಯದಿಂದ ಬದುಕು ಕಟ್ಟಿಕೊಳ್ಳಲಿ ಎಂಬ ಆಶಯವಿದೆ, ಪ್ರೇರಣೆಯೂ ಇದೆ.

Surya Varsha

8/4/20251 min read

ಕಾಲು ಮಡಚಿ ಒದ್ದು ಬಿಡಬಾರದೇ ಈ ಪೆಡಂಭೂತವನ್ನ...?!

ಇತ್ತೀಚೆಗೆ ಮನಸಿಗೆ ತುಂಬಾ ನೋವುಂಟು ಮಾಡಿದ ಸುದ್ದಿ. ಅದೂ ಒಂದೇ ಎರಡೇ ಅಲ್ಲ, ಪ್ರತಿ ವಾರದಲ್ಲೂ ಸರಣಿ ಸಾವುಗಳು. ಕಾರಣ: ವರದಕ್ಷಿಣೆ.

ನೋಡಿದರೂ ನೋಡದಂತೆ ಮುಖ ತಿರುಚಿ ಹೋಗಲಾಗುತಿಲ್ಲ. ಯಾಕಂದ್ರೆ ಇಂದು ಯಾರೋ ಒಬ್ಬ ಹೆಣ್ಣುಮಗಳ ಕಥೆಯಾದ್ರೆ, ನಾಳೆ ನಮ್ಮನೆ ಹುಡುಗಿಯೇ ಆಗಬಹುದು.

ಛೆ... ಎಂತಹ ಕ್ರೂರ ವಿನೋದವಿದು? ಇದು ನಿಜವಾಗಲೂ ಯಾರ ತಪ್ಪು? ಹೆಣ್ಣಿದ್ದೋ? ಅವಳ ಮನೆಯವರದ್ದೋ? ಅಥವಾ ಗಂಡಿನದ್ದೋ?

ನಾವ್ಯಾಕೆ ಇವನ್ನೆಲ್ಲ ಯೋಚನೆ ಮಾಡಬೇಕು ಅಲ್ವಾ? ಕೇರಳದ ತ್ರಿಶೂರಿನಲ್ಲೋ ಅಥವಾ ಚಿಕ್ಕಮಂಗಳೂರಿನ ಯಾವುದೋ ಮೂಲೆಯಲ್ಲೋ ನಡೆಯುವಂತಹ ಘಟನೆಗಳು ನಮ್ಮನ್ನು ಬಾದಿಸುವುದಿಲ್ಲ ಅಲ್ವೆ? ನಮ್ಮ ಕಾಲ ಬುಡಕ್ಕೆ ಬರುವವರೆಗೂ ನಾವು ಅಲ್ಲಾಡುವ ಜಾಯಮಾನದವರೇ ಅಲ್ಲ. ಇದೇ ನಮ್ಮ ಅಸಲಿ ಮುಖ! ನಾವು ಎಡವೋದು ಇಲ್ಲೇ. ಇನ್ನಾದರೂ ವರದಕ್ಷಿಣೆ ಹೆಸರಲ್ಲಿ ಜೀವ ಕಳೆದುಕೊಳ್ಳುತ್ತಿರುವ ಪ್ರತಿಯೊಬ್ಬ ಹೆಣ್ಣು ನಮ್ಮನೆ ಹುಡುಗಿಯೇ ಎಂಬ ಭಾವನೆ ನಮ್ಮೊಳಗೆ ಮೂಡಲೇ ಬೇಕು. ವರದಕ್ಷಿಣೆಯನ್ನು ಬಹಿಷ್ಕರಿಸುವ ದಿಟ್ಟ ನಡೆ ನಮ್ಮ ಮನೆಯಿಂದಲೇ ಶುರುವಾಗಬೇಕಿದೆ. ಇಲ್ಲದಿದ್ದಲ್ಲಿ ನಾಳೆ ನಮ್ಮ ಮಕ್ಕಳು ಇದೇ ಕಾರಣಕ್ಕೆ ಮತ್ತೊಬ್ಬರ ಸುದ್ಧಿ ವಿಷಯವಾಗುತ್ತಾರೆ.


ತನ್ನ ಕೈಯ್ಯಾರೆ ಹೆತ್ತು, ಹೊತ್ತು, ಸಾಕಿದ ಮಗುವನ್ನೇ ಕೊಂದು ತಾನೂ ಜೀವ ಕಳೆದುಕೊಳ್ಳಬೇಕಾದರೆ ಅವಳು ಅನುಭವಿಸಿದ ಯಾತನೆ ಹೇಗಿರಬೇಡ?

ವಿದೇಶದಲ್ಲಿ ಗಂಡನ ಜೊತೆ ಮಗಳು ಸುಖವಾಗಿದ್ದಾಳೆಂದು ಹಾಯಾಗಿದ್ದ ಹೆತ್ತವರ ಮಡಿಲಿಗೆ ಮಗಳು ನಿರ್ಜೀವವಾಗಿ ಬಂದು ಸೇರಿದರೆ, ಹೆತ್ತವರು ಸಹಿಸುವದೆಂತು?

ಇದಕ್ಕೆಲ್ಲ ಕಾರಣ ವರದಕ್ಷಿಣೆಯಾದರೆ, ಈ ಪೆಡಂಭೂತದ ಅನಿವಾರ್ಯತೆ ನಮಗಿದೆಯೇ?


ಹಿಂದಿನ ಕಾಲದಲ್ಲಿ ಹಿರಿಯರು ಕೊಟ್ಟ ಮನೆಯಲ್ಲಿ ಹೆಣ್ಣುಮಗಳು ಸುಖವಾಗಿರಲೆಂದು ತಮ್ಮ ಕೈಲಾದ ರೀತಿಯಲ್ಲಿ ಹಣವನ್ನೋ, ಚಿನ್ನವನ್ನೋ ಕೊಟ್ಟು ಕಳುಹಿಸುತ್ತಿದ್ದರು. ಆದರೆ ಇಂದು ಆ ಹೃದಯ ವ್ಯೆಶಲ್ಯತೆ ಒಂದು ಪಿಡುಗಾಗಿ ಬೆಳೆದು ನಿಂತಿದೆ. ಕಷ್ಟಪಟ್ಟಾದ್ರೂ ವರದಕ್ಷಿಣೆ ಕೊಡಲೇಬೇಕೆನ್ನುವುದು ಅನಿವಾರ್ಯವಂತಾಗಿದೆ. ಇಲ್ಲವಾದರೆ ಕೊಟ್ಟ ಮನೆಯಲ್ಲಿ ಹೆಣ್ಣಿಗೆ ಬೆಲೆಯಿಲ್ಲವೆಂಬಂತೆ ಪರಿಸ್ಥಿತಿ ಕೈಮೀರಿಹೋಗಿದೆ. ಕೇಳಿದಷ್ಟು ಹಣ ಗಂಡಿನ ಕೈಸೇರದಿದ್ದಲ್ಲಿ ಅವಳ ಬಾಳು ನರಕವೇ ಸರಿ.

ಹಾಗಾದ್ರೆ ನಾವು ತಪ್ಪು ಮಾಡುತಿರೋದು ಎಲ್ಲಿ? ನಮ್ಮ ರಕ್ತ, ಬೆವರು ಹಾಕಿ, ಉಸಿರು ಕೊಟ್ಟು, ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಿದ ಮಗುವನ್ನು ಯಾರೋ ಒಬ್ಬ ಬಕ ಪಕ್ಷಿಗೆ ಕೊಟ್ಟು ಜೀವಂತ ಸಮಾಧಿ ಮಾಡೋದಂದ್ರೆ ಇಲ್ಲಿ ದೂರಬೇಕಾದದ್ದು ಹೆತ್ತವರನ್ನೇ ಅಲ್ಲವೇ?

ಮದುವೆಯಾಗಿ ನೇಣಿಗೇರೋದಕ್ಕಿಂತ ಹುಟ್ಟಿದ ಮನೆಯಲ್ಲೇ ಅವಳು ಹಾಯಾಗಿ ಇರಬಹುದಲ್ವಾ? ಇಂತಹ ನರಬಲಿಯ ಮದುವೆ ಯಾತಕ್ಕಾಗಿ?

ಕಾಲವಂತೂ ಹಿಂದಿನಂತಿಲ್ಲ... ಹೆಣ್ಣುಮಗಳೂ ಕೂಡ. ನಾಲ್ಕು ಗೋಡೆಯ ಮಧ್ಯದಿಂದ ಅವಳು ಯಾವತ್ತೋ ಹೊರಬಂದಾಗಿದೆ. ಅಕ್ಷರಸ್ಥೆಯೂ ಹೌದು. ಪ್ರತಿ ಕ್ಷೇತ್ರದಲ್ಲೂ ತಾನು ಸೈ ಅನ್ನಿಸಿಕೊಂಡವಳು. ತನ್ನ ಅಭಿಪ್ರಾಯವನ್ನು ಪ್ರತಿರೋಧಿಸುವವರ ಮಧ್ಯೆ ದ್ವನಿ ಎತ್ತಿ ನಿಲ್ಲಲು ಶಕ್ತಳು. ಹಾಗಿದ್ದರೆ ತನ್ನ ವೈಯಕ್ತಿಕ ಬದುಕಲ್ಲಿ ಅವಳು ಸೋಲುತ್ತಿರುವುದೇಕೆ? ಕಾರಣವೊಂದೇ ವರದಕ್ಷಿಣೆ! ಉಳಿದೆಲ್ಲ ಸಮಸ್ಯೆಗಳಿಗೆ ನಂತರದ ಸ್ಥಾನ. ಇದರಲ್ಲಿ ಹೆತ್ತವರ ಪಾಲು ಬಲು ದೊಡ್ಡದು. ವರದಕ್ಷಿಣೆ ಕೇಳುತ್ತಾ ಹುಡುಗಿ ಕೊಡಿ ಎಂದು ಬರುವ ಹುಡುಗನ ಮನೆಯವರಿಗೆ ಕ್ಷಣದಲ್ಲೇ ಬಿಸಿತಾಗಿಸುವ ಉತ್ತರ ಕೊಟ್ಟು ಕಳುಹಿಸುವ ಬದಲು ಆ ಕಟುಕನ ಕೈಗೆ ತಮ್ಮ ಮುದ್ದಿನ ಮಗಳನ್ನು ಕೊಡಲು ಮುಂದಾಗುತ್ತಾರಲ್ಲ... ಆ ಕ್ಷಣವೇ ಮಗಳಿಗೆ ಸಮಾಧಿ ತೋಡಿಯಾಯಿತು. ಅಸಲಿ ಸಮಸ್ಯೆಗಳ ಪ್ರಾರಂಭ ಇಲ್ಲಿಂದಲೇ.

ಸಾಲ ಮಾಡಿ ಅಡಂಭರದಲ್ಲಿ ಮದುವೆ ಮಾಡಿದ್ದಾಯಿತು. ಹೆಚ್ಚೆಂದರೆ 6 ತಿಂಗಳು, ಅಷ್ಟರಲ್ಲೇ ಸಮಸ್ಯೆಗಳು ಶುರುವಾಗಿರುತ್ತವೆ. ಮದುವೆಯ ಹೊಸತನದ ಚೈತನ್ಯ ಅವಳಲ್ಲಿ ಕುಂದಲು ಆಗಲೇ ಆರಂಭವಾಗಿರುತ್ತದೆ. ತನ್ನ ಅಸಹಾಯಕತೆಯನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದೆ ತೊಳಲಾಡುವ ಅದೆಷ್ಟು ಹೆಣ್ಣು ಮಕ್ಕಳು ನಾವರಿಯದೆ ನಮ್ಮ ನಡುವಿದ್ದಾರೋ... ಗಂಡನ ಮನೆಯಲ್ಲಿ ಬದುಕೋದು ತನ್ನಿಂದ ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಾಗ, “ಕೊಟ್ಟ ಹೆಣ್ಣು ಏನೇ ಕಷ್ಟ ಬರಲಿ ಸಹಿಸಿ, ಗಂಡನ - ಅವರ ಮನೆಯವರ ಖುಷಿಗಾಗಿ ಬದುಕಬೇಕು” ಎಂಬ ಬುದ್ಧಿವಾದವೇ ಅವಳಿಗುತ್ತರವಾದಾಗ, ಇನ್ಯಾರು ಆಸರೆ ಅವಳಿಗೆ? ಪರಲೋಕದ ಬಾಗಿಲಷ್ಟೇ ಅವಳಿಗೆ ಕಾಣುತ್ತದೆ.

ಕಾಲ ಹಿಂದಿನಂತಿಲ್ಲ ಎಲ್ಲವೂ ಬದಲಾಗಿದೆ ಎಂದು ನೂರು ಬಾರಿ ಹೇಳುವ ನಮ್ಮ ಮನಸ್ಥಿತಿ ಮಾತ್ರ ಅದೇ ಹಳೆಯ ಕಟ್ಟುಪಾಡಲ್ಲಿ ಬಿದ್ದು ಕೊಳೆತು ನಾರುತಿದೆ. ತಮ್ಮ ಹೊಟ್ಟೆಗಿಲ್ಲವಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಮುಂದಿನ ಭವಿಷ್ಯ ಗಟ್ಟಿ ಮಾಡುವ ಪಾಲಕರು ಮದುವೆ ವಿಚಾರಕ್ಕೆ ಬರುವಾಗ ಬುದ್ಧಿಶೂನ್ಯತೆ ಮೆರೆಯುವುದು ಏಕೆ? ಆಗ ಇನ್ನಷ್ಟು ಯೋಚನೆ ಮಾಡಿ ಮುಂದಡಿ ಇಡಬೇಕಾದ ಸಮಯವಲ್ಲವೇ? ಮದುವೆ ಅವಳ ಕನಸು. ಅವಳ ಜೀವನ. ಅಲ್ಲಿ ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಸ್ವಾತಂತ್ರ್ಯ ಅವಳಿಗಿರಬೇಕು. ಅಪ್ಪ ಅಮ್ಮನ ಇಷ್ಟಕ್ಕಾಗಿ ನಡೆಯೋ ಮದುವೆಯಾಗದೆ ಅವಳ ಪೂರ್ಣ ಒಪ್ಪಿಗೆಯಿರಬೇಕು. ಹಾಗಿದ್ದಲ್ಲಿ ಬಹುಪಾಲು ಸಮಸ್ಯೆಗಳು ಉದ್ಭವವಾಗುವುದಿಲ್ಲವೇನೋ...

ಮದುವೆ ಮಾಡಿಕೊಟ್ಟಾಯಿತು, ನಮ್ಮ ಕರ್ತವ್ಯ ಮುಗಿಯಿತು ಎಂದು ಕೈ ಕಟ್ಟಿ ಕೂರುವ ಬದಲು — ತಮ್ಮ ಮಗಳು ಗಂಡನ ಮನೆಯಲ್ಲಿ ಸುಖವಾಗಿದ್ದಾಳೆಯೇ... ಎಂದು ವಿಚಾರಿಸಲೇ ಬೇಕಾಗಿದೆ. ಅವಳ ಕಷ್ಟಗಳನ್ನು ಬಂದು ಹೇಳಿಕೊಳ್ಳುವಷ್ಟು ಸ್ವಾತಂತ್ರ್ಯ ಕಲ್ಪಿಸಿ ಕೊಡಬೇಕಾಗಿರೋದು ಹೆತ್ತವರೇ. ಅಪ್ಪ ಅಮ್ಮ ಮಕ್ಕಳ ಸ್ನೇಹಿತರಂತಿರಬೇಕು. ಆಗ ಮುಕ್ತವಾಗಿ ಏನನ್ನಾದರೂ ಹಂಚಿಕೊಳ್ಳಬಹುದು. ಕೊಟ್ಟ ಮನೆಯಲ್ಲಿ ತಾನು ಒಂಟಿಯಾಗುವ ಪರಿಸ್ಥಿತಿ ಎದುರಾದರೂ “ತವರು ಮನೆಯಲ್ಲಿ ಧೈರ್ಯ ತುಂಬೋ, ಕಷ್ಟಕ್ಕೆ ಹೆಗಲು ಕೊಡೋ, ಕಣ್ಣೀರಾಕಿದಾಗ ‘ಹೋಗಲಿ ಬಿಡು ಕಂದ’ ಎಂದು ಬಾಚಿ ತಬ್ಬಿಕೊಳ್ಳುವ ಹೆತ್ತವರು ಇದ್ದಾರೆ” ಅನ್ನೋ ಭರವಸೆಯೊಂದೇ ಸಾಕು — ಅವಳು ಗಟ್ಟಿಗಿತ್ತಿಯಾಗಲು.

ಗಂಡನ ಕೈಹಿಡಿದು ಮುಂದಿನ ಬಾಳ್ವೆ ಸಾಧ್ಯವಿಲ್ಲವೆಂಬ ಹಂತಕ್ಕೆ ಬರುವಾಗ, ಕುಂದಿದಾಗ ಖಂಡಿತಾ ತವರು ಮನೆ ಬಾಗಿಲು ಅವಳಿಗಾಗಿ ತೆರೆದಿರುತ್ತದೆ ಎಂಬ ಧೈರ್ಯ ಪ್ರತಿಯೊಬ್ಬ ಹೆಣ್ಣಿಗೂ ಕೊಡಬೇಕಾದ ಅನಿವಾರ್ಯತೆ ಇದೆ. ಖಂಡಿತವಾಗಿಯೂ ಅವಳು ಗಂಡನ ಕ್ರೌರ್ಯಕ್ಕೆ ಬಲಿಯಾಗಬೇಕಾದ ವಸ್ತುವೂ ಅಲ್ಲ, ಅತ್ತೆಯ ದರ್ಪದ ಕಾವಿಗೆ ಕರಗಬೇಕಾದ ಬಲಿಕುರಿಯೂ ಅಲ್ಲ. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆದು ಬಂದವಳು ಹಠಾತ್ತಾಗಿ ತನ್ನ ಹೆತ್ತವರನ್ನು, ಪ್ರೀತಿಪಾತ್ರರನ್ನೂ ಬಿಟ್ಟು ಹೊಸ ಮನೆ, ಪರಿಸರ, ಗಂಡ, ಅತ್ತೆ ಎಲ್ಲರನ್ನೂ ಮೆಚ್ಚಿಸಿ — ಒಂಚೂರು ಏರುಪೇರಾದ್ರೂ ಎಲ್ಲರಿಂದಲೂ ಕೆಲಸಕ್ಕೆ ಬಾರದವಳು ಎಂದೆನಿಸಿ ಜೀವನ ಸಾಗಿಸಬೇಕಾದವಳು ಅಲ್ಲವೇ ಅಲ್ಲ.

ಜೊತೆಯಾಗಿ ಮುನ್ನಡೆಯಲು ಸಾಧ್ಯವಿಲ್ಲವೆಂದು ಅರಿತ ಕ್ಷಣ ಅಲ್ಲಿಂದ ಹೊರಬಂದು ತನ್ನ ಬದುಕನ್ನು ಕಟ್ಟಿಕೊಳ್ಳಲು ಅವಳಿಗೆ ಹೆಗಲಾಗಬೇಕಿದೆ. ಬಂದ ಕಷ್ಟವನ್ನೆಲ್ಲ ಸಹಿಸಿ, ಕ್ಷಮಿಸಿ, ಕೊನೆಗೊಂದು ದಿನ ಗಂಡನ ಹಿಂಸೆಗೆ ಬಲಿಪಶುವಾಗದೆ ನೇಣೊಂದೇ ಮುಂದಿನ ಪರಿಹಾರವೆಂದು ಹೇಡಿಯಾಗದೆ ತನ್ನ ಶಕ್ತಿಯನ್ನರಿತು ಮುನ್ನುಗ್ಗಬೇಕು.

ತನ್ನೊಳಗಿನ ಭಾವನೆಗಳನ್ನು ಹೂತು ಹಾಕಿ ಜೀವನ ಕೊನೆಗಾಣಿಸದೆ — ಸ್ವಚ್ಛಂದವಾದ ತಿಳಿ ನೀಲ ಆಕಾಶದಲ್ಲಿ ಹಾರಾಡುವ ಹಕ್ಕಿಯಂತೆ ನಿರ್ಮಲವಾಗಲಿ ಅವಳ ಬಾಳು.

✍️ ಸೂರ್ಯ ವರ್ಷ